Sunday, October 25, 2009

ಸಂಭಾಷಣೆ

ಮೋಡದ ಒಳಗೆ ಹನಿಗಳ ಗೂಡು
ಬಾಯ್ತೆರೆದ ಭೂಮಿಯ ಕಡೆಗೂ ನೋಡು
ಮುಂದಾದರು ಹೋಗು
ಮಳೆಯಾದರು ಆಗು
ನಿಲ್ಲದಿರು ಹಾಗೆ ನಿಂತಲ್ಲೇ
ಮಳೆಯಾಗುವ ಆಸೆ ನಿನಗಿದ್ದರೆ
ಆಗಲದು ಈಗಲೇ ಇಲ್ಲೇ

ಇದು ನಮ್ಮ ರೈತನ ಸಂಭಾಷಣೆ
ಆಗಾಗ ನಿಂತು ಮಳೆಯಾಗದ
ಮೋಡಗಳೊಡನೆ...

Thursday, October 15, 2009

"ಅಮ್ಮ ..... ನೀನು ನಾನು "



ಹುಟ್ಟುತ್ತಾ ತೆರೆದ ಕಣ್ಣಿಗೆ
ಕಂಡಿದ್ದೆ ನೀನು
ನಿನ್ನ ಹೊಲಿಕೆಯನ್ನೇ ಹೊತ್ತು
ಹುಟ್ಟಿದೆ , ನಿನ್ನಂತೆಯೇ ನಾನು

ಮಲಗುವ ಹೊತ್ತು ಏಳುವ ಹೊತ್ತು
ತಿಳಿಯದ ನಾನು
ಮಲಗಿಸಿ ಏಳಿಸಿ
ಆಡಿಸಿ ಮುದ್ದಿಸಿದೆ ನೀನು

ತೂಗುವ ತೊಟ್ಟಿಲಲ್ಲಿ
ನೆಮ್ಮದಿಯ ನಿದ್ದೆ ನಾನು
ಲಾಲಿ ಹಾಡುತ್ತಾ ತೊಟ್ಟಿಲ ತೂಗುತ್ತ
ನನ್ನ ನಿದ್ದೆಗೆ ಆಸರೆ ನೀನು

ಕಾಣದಿದ್ದರೂ ನೀನೊಂದು ಕ್ಷಣ
ದುಃಖದ ಒಡಲು ನಾನು
ನಿನ್ನ ಕಂಡು ನಾ ನಗಲು
ಸಂತಸದ ಮಡಿಲು ನೀನು

ಈಗ ಮತ್ತೆ ನಿನ್ನ ಮಗು ಆಗೋ
ಆಸೆ ಹೊತ್ತ ಮೂಢ ನಾನು
"ನೀನೆಂದಿದ್ದರೂ ನನ್ನ ಮಗು ಕಂದ"
ಎಂದು ಸಂತ್ಯೆಸುವೆ  ನೀನು

ನಿನ್ನ ಗರ್ಭದಲ್ಲಿ ಜಾಗ ಪಡೆದ
ಪುಣ್ಯವಂತ ನಾನು
ಜಗವೆಲ್ಲ ಹೆಮ್ಮೆ ಪಡುವ "ಅಮ್ಮ"
ಪ್ರೀತಿಯ ಸಮುದ್ರ ನೀನು....

                        - ಶ್ರೀ 

Tuesday, October 6, 2009

ಕಾಯುವ ಪರಿ !!

ಕಣ್ಣಲ್ಲೆ ಕೊಲ್ಲೋ
ಆ ಹುಡುಗಿ ಈಗ ಎಲ್ಲೋ
ನನ್ನಿಂದ ದೂರ
ಹೃದಯಾ ಈಗ ಭಾರ
ನನ್ನಂತೆ ಈಗ ಕಾದಿದೆ
ನನ್ನೊಡನೆ ಈ ತೀರ
ಬಾ ಬಾಓಮ್ಮೆ ಚೆಲುವೆ
ಈ ತೀರಕೆ ( ಪಲ್ಲವಿ )

ಆಗೊಮ್ಮೆ ಈಗೊಮ್ಮೆ ಮೋಡಗಳ ನಡುವೆ
ಮರೆಯಾಗೋ ಆ ಚಂದಿರ
ಹಾಗೊಮ್ಮೆ ಹೀಗೊಮ್ಮೆ ಮರೆಯಾಗೋ ನೀ ಕೂಡ
ಅವನಂತೆಯೇ ಸುಂದರ
ಬೀಸುವ ತಂಗಾಳಿ ನೀಡಿದೆ ಹೂಮುತ್ತು
ನಾ ನಿನ್ನ ನೆನೆದ ಈ ಹೊತ್ತಲಿ
ಈ ನನ್ನ ಭಾವಗಳು ನಿನ್ನನ್ನು ಸೇರಿ
ನನ್ನೆಡೆಗೆ ಬರೋ ಆಸೆಯಾ ಬೀಜವ ಬಿತ್ತಲಿ ( ಚರಣ ೧)

ಚಂದದ ಹೂವೊಂದು ನಿನಗೆಂದು ಹಿಡಿದಿರುವೆ
ಕಾದಿದೆ ಹೂವು ನಿನ ಮುಡಿ ಸೇರಲೆಂದು
ನನಗಲ್ಲದಿದ್ದರು ಈ ಹೂವಿಗಾದರು ಬಾ ಬಂದು
ಅಲಂಕರಿಸು ಈ ಹೂವನಿಂದು
ದಯಮಾಡಿ ಬಾ ಬೇಗ ನಾನಿರುವ ಈ ತೀರಕೆ
ನನ್ನ ನಂಬಿಕೆ ಹುಸಿಯಾಗುವ ಮುನ್ನ
ತಡಮಾಡಿಯಾದರೂ ತಪ್ಪದೆ ಬಾ , ನನ್ನುಸಿರು
ನಿನ್ನ ನೆನಪಲಿ ಕರಗೋ ಮುನ್ನ ( ಚರಣ ೨ )

Wednesday, September 2, 2009

ನಾನು, ಅವಳು ,ಬೆಳದಿಂಗಳು !!!!

ನಾನು ಅವಳು ನಮ್ಮೊಡನೆ ಬೆಳದಿಂಗಳು
ಎಣಸಿದರೂ ಸಿಗವು ಇಂತಹ ರಾತ್ರಿಗಳು

ಗಾಳಿಯು ನುಸುಳದಷ್ಟು ಸನಿಹ ನನ್ನವಳು
ನನ್ನದೇ ಆಗಿತ್ತು ಆ ಒಂದು ಇರುಳು

ಅಲುಗಿದರೂ ಅವಳ ಓಲೆ ಕೇಳಿಸುವಂತ ನಿಶಬ್ದ
ಇದ ಕಂಡ ಚಂದಿರ ನಿಂತಲ್ಲೇ ಸ್ತಬ್ಧ

ಇಂತಹ ಇರುಳಲ್ಲಿ ಮೌನವೇ ಮಾತಾಗಿತ್ತು
ಬೀಸುವ ತಂಗಾಳಿಯೇ ನಮಗೆ ಜೊತೆಯಾಗಿತ್ತು

ಮೌನ ಮುರಿಯುವ ಮಾತು ಇಬ್ಬರೂ ಆಡಲಿಲ್ಲ
ಅವಳು ನನ್ನ ನಾನು ಅವಳ ಬಿಟ್ಟರೆ ಬೇರೇನೂ ನೋಡಲಿಲ್ಲ

ಬಳಸಲು ಅವಳು ನನ್ನನ್ನು ತೋಳಲಿ
ಈ ನಮ್ಮ ಪ್ರೀತಿಗೆ ಚಂದಿರನೂ ತಲೆದೂಗಲಿ

ಕಳೆದರೆ ಈ ರಾತ್ರಿ ಮತ್ತೆ ಆ ಹಗಲು
ಮರೆಯಾಗುವೆ ಎಲ್ಲಿ ಎನ್ನುವುದೊಂದೇ ದಿಗಿಲು

ಇರುವಾಗಲೇ ನಾನು ನಿನ್ನ ಜೊತೆಯಲಿ
ನಿಲ್ಲಲಿ ಕಾಲ ನನ್ನ ಬಾಳ ಹಾದಿಯಲಿ

Tuesday, September 1, 2009

ಮತ್ತೆ ಕಾಣಬೇಡ

(ವಿಷಯ : ಪ್ರೇಯಸಿ ದೂರ ಸರಿದ ನಂತರ , ಅಂಥವಳನ್ನೇ ಮತ್ತೆ ಕಂಡಾಗ ಅವನ ಮನದಲ್ಲಿ ನಡೆದ ಸಂಭಾಷಣೆ )
**********************************
ಎಲ್ಲ ಮರೆತು ಮತ್ತೆ ನಾನಾಗಿದ್ದೆ ಮೊದಲಿನಂತೆ
ಅಷ್ಟರಲ್ಲೇ ಕಂಡಿದ್ದಳು ಮತ್ತೊಬ್ಬಳು ಅವಳಂತೆ

ನೆನಪಾಗಿತ್ತು ಆ ಬೆಳಕು ನನ್ನವಳು ನಗುವಾಗ
ಮತ್ತೆ ಆ ನಗುವನ್ನು ಇವಳಲ್ಲಿ ಕಂಡಾಗ

ಮೋಹಗೊಂಡಿತ್ತು ಮತ್ತೆ ಅವಳೆಡೆಗೆ ಮನಸು
ಕಾಣ ಬಯಸಿತ್ತು ಮತ್ತೆ ಇನ್ನೊಂದು ಕನಸು

ಮತ್ತೇಕೆ ಅವಳು ಇವಳಲ್ಲಿ ಕಂಡಳು
ನೇರವಿದ್ದ ದಾರಿಯಲಿ ಮತ್ತೆ ತಿರುವು ನೀಡಲು

ನನಗೇಕೆ ಮತ್ತೆ ಅವಳೆಡೆಗೆ ಮೋಹ
ತೀರಲಿಲ್ಲವೇನೆ ನಿನಗೆ ನನ್ನ ಕೊಲ್ಲೋ ದಾಹ

ಮತ್ತೆ ಕಾಣಬೇಡ ನಾ ನಡೆವ ದಾರಿಯಲಿ
ಕಂಡರೂ ಕೊಲ್ಲಬೇಡ ಆ ನಿನ್ನ ನೋಟದಲಿ

***********************************

Saturday, August 22, 2009

ಕ್ಷಮಿಸು

ನಿನ್ನ ಮರೆತು ನಾ ನಡೆದ
ದಾರಿಯಲಿ ಬರೇ ನಾಲ್ಕು ಹೆಜ್ಜೆ
ಅಷ್ಟರಲ್ಲೇ ಕೇಳಿಸಿತ್ತು ಮತ್ತೆ ನಿನ್ನ
ನೆನಪುಗಳ ಗೆಜ್ಜೆ

ನಿನ್ನೊಡನೆ ಬೆಸೆದಿರುವ
ನೆನಪುಗಳು ಸಾವಿರ
ಅದಕ್ಕೆ ಏನೋ , ನಿನ್ನ ನೆನಪಾಗಿತ್ತು
ನಡೆದಂತೆ ತುಸು ದೂರ

ಹಿಂದಿರುಗುವೆ ಮತ್ತೆ ನಿನ್ನ
ಗೂಡಿಗೆ , ನಿನ್ನೆಡೆಗೆ
ಕ್ಷಮಿಸಿದರೆ ನೀ ನನ್ನ , ನಿನ್ನ
ಮರೆಯಬೇಕೆಂದು ನಾ
ಮಾಡಿದ ತಪ್ಪಿಗೆ

Friday, August 21, 2009

ಎಲ್ಲ ನಿನ್ನಿಂದ

ಹೆಣೆಯಲೇ ನಿನ್ನ ನೆನಪುಗಳಿಂದ
ಒಂದು ಕವಿತೆ ?
ನೀ ನೆನಪಾದರೆ

ಸಂಬ್ರಮಿಸಲೇ ನಿನ್ನ ನಗುವಿನಿಂದ
ಒಂದು ದಿನ?
ನೀ ನಕ್ಕರೆ

ತೋರಿಸಲೇ ನಿನ್ನ ಆ ಚಂದಿರನಿಗೆ
ಒಂದು ಹುಣ್ಣಿಮೆಯಲಿ?
ನೀ ಸಿಕ್ಕರೆ

ಪ್ರೀತಿಸಲೇ ನಿನ್ನ ನೆರಳನ್ನು
ಒಂದು ಕ್ಷಣ ?
ನೀ ಒಪ್ಪಿದರೆ

ಮರೆಯಲೇ ನಿನ್ನನ್ನು
ಒಂದು ದಿನ ?
ಮತ್ತೊಬ್ಬಳು ಪರಿಚಯವಾದರೆ ...

(ಹ ಹ್ಹ ಹ್ಹ ಹಾ )

Monday, August 17, 2009

ಹಿತವಾದ ಕನಸು

ಹಿತವಾಗಿದೆ ನೀ ನನ್ನವಳೆಂಬ
ಆಲೋಚನೆ
ಮಿತಿಮೀರಿದೆ ಅದು ನಿಜವಲ್ಲ
ಎಂಬ ಯಾತನೆ

ತೆರೆದಿರುವೆ ನಿನ್ನ ಸ್ವಾಗತಿಸಲೆಂದೇ
ಹೃದಯದ ಹೆಬ್ಬಾಗಿಲು
ಬಾರದಿದ್ದರೂ ಪರವಾಗಿಲ್ಲ
ತುಳಿದಾದರು ಹೋಗು ಈ
ಹೃದಯದ ಹೊಸ್ತಿಲು

ಇನ್ನ್ಯಾರು ಇರಲಿಲ್ಲ ನನ್ನ
ಮನದಲಿ ,
ನಿನ್ನ ಹೊರತು
ಈಗ ನೀನು ಇಲ್ಲ ,
ಬರೇ
ಉಳಿದಿದೆ ಮನದ ಮರಳಲಿ
ನೀ ಮೂಡಿಸಿದ ಹೆಜ್ಜೆಯ
ಗುರುತು

Thursday, August 6, 2009

ನೀಡು ಉತ್ತರ

ಕೊಟ್ಟ ಮನಸಿಗೂ
ಕೂಡಿಟ್ಟ ಕನಸಿಗೂ
ಇರಲಿಲ್ಲ ನನ್ನಲ್ಲಿ ದಾಖಲು
ಇಷ್ಟು ಸಾಕಿತ್ತೆ ನಿನಗೆ
ನಿನ್ನಂಗಳದಿಂದ ನನ್ನ ನೂಕಲು?

ಇನ್ನು ನೀನಿಲ್ಲ ಎಂಬ
ಚಿಕ್ಕ ಸತ್ಯ
ಕಾಡುತ್ತಿದೆ ನನ್ನ ಏಕೆ
ಬೆಂಬಿಡದೆ ನಿತ್ಯ?

ನಡೆದು ನಾಲ್ಕು ಹೆಜ್ಜೆ
ಮಧ್ಯದಲ್ಲೇ ಮರೆಯಾದೆಯಾ
ಕಂಡು ನಾಲ್ಕು ಕನಸು
ಅಲ್ಲೇ ಅದಕೆ ತೆರೆ
ಎಳೆದೆಯಾ?

ಇರಲಿ ಈ ಪ್ರಶ್ನೆಗಳು
ಹಾಗೆ ನಿನ್ನ ನೆನಪಲಿ
ನೀಡುವೆಯಂತೆ ಉತ್ತರ
ಮತ್ತೆ ಭೇಟಿ ಆದರೆ
ಬಾಳ ದಾರಿಯಲಿ

Monday, August 3, 2009

ಏಕೆ ?


ನೀನೇ ಬೇಕೆಂಬ ಹಠ
ನನಗೇಕೆ ?
ನೀ ಹೋದರೂ ನಿನ್ನ
ನೆನಪು ಇನ್ನೇಕೆ ?
ನೀ ತೊರೆದರೂ ನನ್ನ
ನಿನ್ನನ್ನೇ ಪ್ರೀತಿಸುವ
ಹುಚ್ಚು
ನಾ ಹೀಗೇಕೆ ?

Wednesday, July 15, 2009

ನಾ ಕಂಡ ಕನಸು


ಬೆಳಕಾಗುವೆಯಾ
ನಾ ನಡೆಯುವ ದಾರಿಗೆ
ಹೂವಾಗುವೆಯಾ
ನನ್ನ ಅಂಗಳದ ತೋಟಕೆ

ನಿನ್ನನ್ನೇ ನಂಬಿರುವ
ಹುಂಬ ನಾನು
ಜೊತೆಯಾಗುವೆಯಾ
ನಾ ಕಂಡ ಕನಸಿಗೆ

Tuesday, July 14, 2009

ಪ್ರೀತಿಯ ಬರವಣಿಗೆ

ಮತ್ತೆ ಬರುವೆ ಎಂದು ಕಾದಿದ್ದೆ
ನೀ ಹೋದ ದಾರಿಯಲ್ಲೇ
ಕತ್ತಲಾದರೂ ಅಲ್ಲೆ ಇದ್ದೆ ನಿನಗೆಂದೆ
ಇಟ್ಟ ದೀಪದ ಬೆಳಕಲ್ಲೇ
ಬರುವೆಯಾ ಬಂದು ಕರೆಯುವೆಯಾ

ನಿನ್ನೊಡನೆ ಒಯ್ದಿರುವೆ ನನ್ನ
ಪುಟ್ಟ ಮನಸನು
ಅದರೊಡನೆ ಕಳಿಸಿರುವೆ ನನ್ನ
ಚಿಕ್ಕ ಕನಸನು
ತರುವೆಯಾ ತಂದು ಕೊಡುವೆಯಾ

ಇಲ್ಲಿ ನಾ ಬರೆದಿರೋ
ಪ್ರತಿ ಅಕ್ಷರ
ನಿನ್ನೆಷ್ಟು ಪ್ರೀತಿಸಿದೆ ಎಂಬ
ಪ್ರಶ್ನೆಗೆ ಉತ್ತರ
ಓದುವೆಯಾ ಓದಿ ನನ್ನ ಸೇರುವೆಯಾ

Monday, July 13, 2009

ಬೆಳದಿಂಗಳ ಬಾಲೆ




ಓ ನನ್ನ ಬೆಳದಿಂಗಳ ಬಾಲೆ
ನಿಂತೆ ಏಕೆ ನೀ ಇನ್ನು ಅಲ್ಲೇ
ನಾನಿರಲು ನಿನ್ನೊಡನೆ ಇನ್ನೇಕೆ ಲಜ್ಜೆ
ಮುಂದೆ ಸಾಗೋಣ ಬಾ ಇಡುತ ಹೆಜ್ಜೆ

Thursday, July 9, 2009

ಅವಳೊಡನೆ


ಬರುವೆಯ ಕರೆದರೆ ನೀ ನನ್ನ ಜೊತೆಯಲಿ
ಮರೆಯುವೆ ನನನ್ನೇ ನಿನ್ನ ಈ ತೋಳಲಿ

ಕರೆದೊಯುವೆ ನಿನ್ನ ಯಾರು ಇಲ್ಲದ ಆ ತೀರಕೆ
ನೀನಾಗುವೆ ಸಾಕ್ಷಿ ನಾ ಹೇಳೋ ನೂರು ಮಾತಿಗೆ

ನಮಿಬ್ಬರ ನಡುವೆ ಸಾಗೋ ಈ ಚಿಕ್ಕ ಪಯಣ
ಇರಲಿ ನೆನಪಲ್ಲೇ ಚಿರವಾಗಿ

ಮೊಳೆದರೆ ಪ್ರೀತಿ ಇಬ್ಬರ ನಡುವೆ
ಬೆಳೆಯಲಿ ಅದು ಮರವಾಗಿ …..

ಇದೆ ಪ್ರೀತಿಯಂತೆ

ಬೀಸಿದ ಗಾಳಿಗೆ ಹಾರಿದ ಎಲೆಯಂತೆ
ಕರಗಿದ ಮೋಡದಿ ಜಾರಿದ ಹನಿಯಂತೆ
ನಿನ್ನ ನೋಟಕೆ ಜಾರಿದ ನನ್ನ ಹೃದಯದ
ಭಾವನೆಯೇ ಪ್ರೀತಿಯಂತೆ