Saturday, August 22, 2009

ಕ್ಷಮಿಸು

ನಿನ್ನ ಮರೆತು ನಾ ನಡೆದ
ದಾರಿಯಲಿ ಬರೇ ನಾಲ್ಕು ಹೆಜ್ಜೆ
ಅಷ್ಟರಲ್ಲೇ ಕೇಳಿಸಿತ್ತು ಮತ್ತೆ ನಿನ್ನ
ನೆನಪುಗಳ ಗೆಜ್ಜೆ

ನಿನ್ನೊಡನೆ ಬೆಸೆದಿರುವ
ನೆನಪುಗಳು ಸಾವಿರ
ಅದಕ್ಕೆ ಏನೋ , ನಿನ್ನ ನೆನಪಾಗಿತ್ತು
ನಡೆದಂತೆ ತುಸು ದೂರ

ಹಿಂದಿರುಗುವೆ ಮತ್ತೆ ನಿನ್ನ
ಗೂಡಿಗೆ , ನಿನ್ನೆಡೆಗೆ
ಕ್ಷಮಿಸಿದರೆ ನೀ ನನ್ನ , ನಿನ್ನ
ಮರೆಯಬೇಕೆಂದು ನಾ
ಮಾಡಿದ ತಪ್ಪಿಗೆ

Friday, August 21, 2009

ಎಲ್ಲ ನಿನ್ನಿಂದ

ಹೆಣೆಯಲೇ ನಿನ್ನ ನೆನಪುಗಳಿಂದ
ಒಂದು ಕವಿತೆ ?
ನೀ ನೆನಪಾದರೆ

ಸಂಬ್ರಮಿಸಲೇ ನಿನ್ನ ನಗುವಿನಿಂದ
ಒಂದು ದಿನ?
ನೀ ನಕ್ಕರೆ

ತೋರಿಸಲೇ ನಿನ್ನ ಆ ಚಂದಿರನಿಗೆ
ಒಂದು ಹುಣ್ಣಿಮೆಯಲಿ?
ನೀ ಸಿಕ್ಕರೆ

ಪ್ರೀತಿಸಲೇ ನಿನ್ನ ನೆರಳನ್ನು
ಒಂದು ಕ್ಷಣ ?
ನೀ ಒಪ್ಪಿದರೆ

ಮರೆಯಲೇ ನಿನ್ನನ್ನು
ಒಂದು ದಿನ ?
ಮತ್ತೊಬ್ಬಳು ಪರಿಚಯವಾದರೆ ...

(ಹ ಹ್ಹ ಹ್ಹ ಹಾ )

Monday, August 17, 2009

ಹಿತವಾದ ಕನಸು

ಹಿತವಾಗಿದೆ ನೀ ನನ್ನವಳೆಂಬ
ಆಲೋಚನೆ
ಮಿತಿಮೀರಿದೆ ಅದು ನಿಜವಲ್ಲ
ಎಂಬ ಯಾತನೆ

ತೆರೆದಿರುವೆ ನಿನ್ನ ಸ್ವಾಗತಿಸಲೆಂದೇ
ಹೃದಯದ ಹೆಬ್ಬಾಗಿಲು
ಬಾರದಿದ್ದರೂ ಪರವಾಗಿಲ್ಲ
ತುಳಿದಾದರು ಹೋಗು ಈ
ಹೃದಯದ ಹೊಸ್ತಿಲು

ಇನ್ನ್ಯಾರು ಇರಲಿಲ್ಲ ನನ್ನ
ಮನದಲಿ ,
ನಿನ್ನ ಹೊರತು
ಈಗ ನೀನು ಇಲ್ಲ ,
ಬರೇ
ಉಳಿದಿದೆ ಮನದ ಮರಳಲಿ
ನೀ ಮೂಡಿಸಿದ ಹೆಜ್ಜೆಯ
ಗುರುತು

Thursday, August 6, 2009

ನೀಡು ಉತ್ತರ

ಕೊಟ್ಟ ಮನಸಿಗೂ
ಕೂಡಿಟ್ಟ ಕನಸಿಗೂ
ಇರಲಿಲ್ಲ ನನ್ನಲ್ಲಿ ದಾಖಲು
ಇಷ್ಟು ಸಾಕಿತ್ತೆ ನಿನಗೆ
ನಿನ್ನಂಗಳದಿಂದ ನನ್ನ ನೂಕಲು?

ಇನ್ನು ನೀನಿಲ್ಲ ಎಂಬ
ಚಿಕ್ಕ ಸತ್ಯ
ಕಾಡುತ್ತಿದೆ ನನ್ನ ಏಕೆ
ಬೆಂಬಿಡದೆ ನಿತ್ಯ?

ನಡೆದು ನಾಲ್ಕು ಹೆಜ್ಜೆ
ಮಧ್ಯದಲ್ಲೇ ಮರೆಯಾದೆಯಾ
ಕಂಡು ನಾಲ್ಕು ಕನಸು
ಅಲ್ಲೇ ಅದಕೆ ತೆರೆ
ಎಳೆದೆಯಾ?

ಇರಲಿ ಈ ಪ್ರಶ್ನೆಗಳು
ಹಾಗೆ ನಿನ್ನ ನೆನಪಲಿ
ನೀಡುವೆಯಂತೆ ಉತ್ತರ
ಮತ್ತೆ ಭೇಟಿ ಆದರೆ
ಬಾಳ ದಾರಿಯಲಿ

Monday, August 3, 2009

ಏಕೆ ?


ನೀನೇ ಬೇಕೆಂಬ ಹಠ
ನನಗೇಕೆ ?
ನೀ ಹೋದರೂ ನಿನ್ನ
ನೆನಪು ಇನ್ನೇಕೆ ?
ನೀ ತೊರೆದರೂ ನನ್ನ
ನಿನ್ನನ್ನೇ ಪ್ರೀತಿಸುವ
ಹುಚ್ಚು
ನಾ ಹೀಗೇಕೆ ?